ಇಳಿಗತಿ-
ಸಮಾಜಶಾಸ್ತ್ರ. ಸಾಹಿತ್ಯ ಮತ್ತು ಕಲಾಕ್ಷೇತ್ರಗಳಲ್ಲಿ ಬಳಕೆಗೆ ಬಂದಿರುವ ಒಂದು ಸಿದ್ಧಾಂತ. ಯೋಗ್ಯತೆಯ ಇಳಿಮುಖ ಪರಿಸ್ಥಿತಿಗೆ, ಅವನತಿಗೆ ಈ ಹೆಸರಿದೆ (ಡಿಕೇಡೆನ್ಸ್). ಇಳಿಗತಿಯೆಂಬ ಮಾತು ಹೊಸದಾದರೂ ಅಭಿಪ್ರಾಯ ಹೊಸದಲ್ಲ. ಕಾಲ ಕೆಟ್ಟು ಹೋಯ್ತು ಎಂಬ ಉದ್ಗಾರ ಎತ್ತದೇ ಇರುವ ತಲೆಮಾರು ಅಪರೂಪ. ಕೆಟ್ಟದೆಂಬ ಅಭಿಶಾಪ ವರ್ತಮಾನ ಸಮಯದ ನೆತ್ತಿಯಮೇಲೆ ಕುಳಿತೇ ಇರುತ್ತದೆ. ದ್ವಾಪರಯುಗ ಕಲಿಯುಗ. ಉತ್ಸರ್ಪಿಣಿ ಅವಸರ್ಪಿಣಿ, ಚಿನ್ನದ ಅವಧಿ ಕಂಚಿನ ಅವಧಿ ಇತ್ಯಾದಿ ವಿಭೇದಗಳನ್ನು ಎಲ್ಲರೂ ಬಲ್ಲರು. ವಾಲ್ಮೀಕಿ ವ್ಯಾಸರಾದ ಮೇಲೆ ಕಾವ್ಯಕ್ಕೆ ಇಳಿಮುಖ ತಾನೆ? ಈಸ್ಕಿಲಸ್ ಸೊಪೋಕ್ಲೀಸರ ತರುವಾಯ ಗ್ರೀಕ್ ರುದ್ರನಾಟಕ ಕುಸಿದು ಬೀಳದೆ ಮತ್ತೆನು? ಪ್ರಾಚೀನ ಸಂಸ್ಕøತಿ ಕಣ್ಮರೆಯಾದ ಅನಂತರ ಯೂರೋಪಿನಲ್ಲಿ ಕತ್ತಲೆಯ ಕಾಲವೇ ಅಲ್ಲವೆ? ಜನಪದದ ಇಂಥ ಗುಂಪು ಕೂಗನ್ನು ಸಾವಧಾನವಾಗಿ ವಿಚಾರ ಮಾಡಬೇಕಾಗುತ್ತದೆ.

	ಇಳಿಗತಿಯೆಂಬುದಕ್ಕೆ ಸಿದ್ಧಾಂತದ ಸ್ವರೂಪವೂ ಹಿರಿಮೆಯೂ ಬಂದದ್ದು 17, 18ನೆಯ ಶತಮಾನಗಳಲ್ಲಿ. ಫ್ರಾನ್ಸಿನ ಮಾಂಟೆಸ್ಕೂ ಇಂಗ್ಲೆಂಡಿನ ಗಿಬ್ಬನ್ ಇಬ್ಬರೂ ರೋಮನ್ ಚಕ್ರಾಧಿಪತ್ಯದ ಏರಿಕೆ ಇಳಿತ ಪತನಗಳನ್ನು ಕುರಿತು ಪಾಂಡಿತ್ಯಪೂರ್ಣವಾದ ಚರ್ಚೆ ನಡೆಸಿದರು. ಇಟಲಿಯ ವಿಕೊ ಚರಿತ್ರೆಯ ಮುನ್ನಡೆ, ಹಿನ್ನಡೆ ಎಂಬ ಶಬ್ದಗಳನ್ನು ಆಲೋಚನಾಪರರ ಮುಂದಿಟ್ಟ. ನಾನಾ ಶೃಂಖಲೆ ಕೃತಕತೆಗಳಿಂದ ನಾಗರಿಕತೆ ಕ್ಷೀಣವಾಗಿದೆ. ಬುನಾದಿಯ ಕಾಡುಜನರಂತೆ ಸರಳವೂ ಸಹಜವೂ ಆದ ಬದುಕಿಗೆ ನರವರ್ಗ ಹಿಂತಿರುಗಬೇಕು ಎಂದು ರೂಸೊ ಸಲಹೆಯಿತ್ತ. ಜನಕ್ಕೆಂತೊ ಜನಾಂಗಗಳಿಗೂ ಹಾಗೆಯೇ ವೃದ್ದಿ ಕ್ಷಯಗಳು ಅನಿವಾರ್ಯವೆಂಬ ನಂಬಿಕೆ ಬೇರೂರಿತು. ಏನಾದರೂ ಇಳಿಗತಿಯೆಂಬ ನುಡಿಯಲ್ಲಿ ಕೊಂಚ ನಿಂದೆ ಇದ್ದೇ ಇತ್ತು. ಮುದಿತನದ ಮುಖ ಸುಕ್ಕನ್ನೂ ಮರಣದ ನಿಶ್ಚೇಷ್ಟತೆಯನ್ನೂ ಅಂದವೆನ್ನುವವರಾರು, ಹೊಗಳುವವರಾರು?

ಆದರೆ, ಭೂಗೋಳದ ಆ ಭಾಗ ಈ ಭಾಗದ ಜನ ಯಾವೊತ್ತು ಯಾವ ರೀತಿ ವರ್ತಿಸುತ್ತಾರೊ ಖಚಿತವಾಗಿ ಮುಂಗಾಣ್ಕೆ ಕಾಣುವವರಾರು? 19ನೆಯ ಶತಮಾನದ ಮಧ್ಯಭಾಗದಲ್ಲಿ ಫ್ರಾನ್ಸಿನಲ್ಲಿ ಒಂದು ಸಾಹಿತ್ಯಕ್ರಾಂತಿ ಉಂಟಾಯಿತು. ನಾಗರಿಕ ಮಂದಿಯ ಬೇಸರದ ಬಾಳನ್ನು ಕಲಾವಂತಿಕೆಯಿಂದ ಕಾದಂಬರಿಯಲ್ಲಿ ಚಿತ್ರಿಸಿದ ಪ್ರತಿಭಾಶಾಲಿ ಫ್ಲೋಬರ್. ಬೋದಿಲೇರ್ ಎಂಬ ದಕ್ಷ ಕವಿ ತನ್ನ ಅವಧಿಯನ್ನು ಸರಿಯಾಗಿ ರೂಪಿಸುವುದಕ್ಕೆ ಹಿಂದೆ ಇಳಿಗತಿಯನ್ನು ಹೊಂದಿದ್ದ ಲ್ಯಾಟಿನ್ ಬಲು ಉಪಯುಕ್ತವೆಂದು ಭಾವಿಸಿ, ಅದರಲ್ಲಿ ಒಂದು ಕವನವನ್ನು ಕಟ್ಟಿದ. ಗೋತಿಯರ್ ಎಂಬಾತ ಇಳಿಗತಿಯೇ ಆಧುನಿಕ ಜೀವನದ ಸ್ವಾರಸ್ಯವೆಂದು ಒತ್ತಿ ಹೇಳಿದ. ಇವರಾರಿಗೂ ಇಳಿಗತಿ ಎಳ್ಳಷ್ಟೂ ಕುರೂಪವಾಗಿ ತೋರಲಿಲ್ಲ; ಪದಾರ್ಥಗಳೂ ಪರಿಸ್ಥಿತಿಯೂ ಇಳಿಗತಿಯಲ್ಲಿ ಇರುವುದರಲ್ಲೆ ಒಂದು ವಿಶಿಷ್ಟ ಲಾವಣ್ಯ, ಒಂದು ಅತ್ಯಾಕರ್ಷಣೆ, ಇವರಿಗೆ ! ಭಗ್ನಾವಶೇಷ. ಸಮಾಧಿ, ಕಣ್ಣು ಕುಕ್ಕುವ ಹಳದಿ ಕೆಂಪು ಬಣ್ಣ, ದೊಡ್ಡದಾಗಿ ವಿಕೃತವಾಗಿ ಬೆಳೆದ ಹೂಮರ, ಕೊಳಕು ಚಿಂದಿ ಬಟ್ಟೆ, ಸ್ತ್ರೀ ಪುರುಷರ ಅಸಹ್ಯ ವ್ಯಾಧಿ ವ್ಯವಹಾರಗಳು-ಎಲ್ಲವೂ ರಸಾನುಭವದ ದೃಷ್ಟಿಯಿಂದ ರುಚಿಕರವಾದವು. ಧರ್ಮದ ದೌರ್ಬಲ್ಯವೂ ನೀತಿಯ ಸಡಿಲತೆಯೂ ಸೊಗಸಾದವೇ. ಇವರ ಅನುಯಾಯಿಗಳಾದ ಮಲರ್ಮೇ, ವರ್ಲೇನ್, ಯೂಯಿಸ್‍ಮನ್ ಮುಂತಾದವರಿಂದ ಇಳಿಗತಿ ಒಂದು ಚಳವಳಿಯಾಗಿ ಪರಿಣಮಿಸಿತು. ಆಸ್ಕರ್ ವೈಲ್ಡ್, ಇಟಲಿಯ ಗೇಬ್ರಿಯಲ್ ಡನನ್ಜಿಯೊಗಳನ್ನು ಈ ಗುಂಪಿಗೆ ಸೇರಿಸಬೇಕು. ಅನೇಕ ದೇಶಗಳಲ್ಲಿ ಸಣ್ಣ ಸಣ್ಣ ಗುಂಪುಗಳು ಹುಟ್ಟಿಬಂದು ಇಳಿಗತಿಯ ಮಠಗಳಾದುವು. ಅವರ ಮೂಲ ಸೂತ್ರ ಇದು: ಕಲೆಯೆಂಬುದು ಮನುಷ್ಯ ಕೃತವಾದ ತಂತ್ರ; ಅದಕ್ಕೂ ಪ್ರಕೃತಿಗೂ ವೈಷಮ್ಯ ಅನಿವಾರ್ಯ. ಬೇಕಾದರೆ ಪ್ರಕೃತಿ ಕಲೆಯನ್ನು ಹಿಂಬಾಲಿಸಲಿ !

ನಾನಾ ವೈಪರೀತ್ಯಗಳೂ ವಿಕಟಾಭಾಸಗಳೂ ಕೆಲ ಕಾಲ ಇಳಿಗತಿಯ ಹೆಸರಿನಲ್ಲಿ ಆಚರಣೆಗೆ ಬಂದುವು. ಈಗ ಈ ಪಂಥ ಪ್ರಚಲಿತವಾಗಿಲ್ಲ. ಅದು ಅಳಿದು ಎಷ್ಟೋ ಸಂವತ್ಸರಗಳಾಗಿವೆ.					
 (ಎಸ್.ವಿ.ಆರ್.)

	ಸಾಹಿತ್ಯ ಮತ್ತು ಕಲೆಗಳ ಚರಿತ್ರೆಯಲ್ಲಿ, ಹಿಂದಿನ ಯುಗದ ಶ್ರೇಷ್ಠತೆ ಇಲ್ಲದ ಯುಗವನ್ನು 'ಇಳಿಗತಿ' ಎಂದು ವರ್ಣಿಸುವುದು.

	ಆದರೆ 19ನೆಯ ಶತಮಾನದ ಫ್ರಾನ್ಸಿನಲ್ಲಿ 'ಇಳಿಗತಿ ಚಳುವಳಿ ಎಂದೇ ಒಂದು ಚಳುವಳಿ ಮೂಡಿತು ಕಲೆ ಸ್ವತಂತ್ರವಾದದು, ಅದಕ್ಕೆ ನೀತಿ-ಔಚಿತ್ಯಗಳ ಸಂಕೋಲೆ ಇರಲಾಗದು, ಕೃತಕ ಸೃಷ್ಟಿಯ ನಿಸರ್ಗಕ್ಕಿಂತ ಹಿರಿದು, ಹೊಸ ಇಂದ್ರಿಯಾನು ಭವಗಳ ಅನ್ವೇಷಣೆಯಿಂದ ಬದುಕು ಸಾರ್ಥಕವಾಗುವುದು. ಎನ್ನುವುದು ಈ ಪಂಥದ ನಿಲುವು.			
 (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ